ಧಾನ್ಯಗಳು -
ಮನುಷ್ಯರು ಮತ್ತು ಪ್ರಾಣಿಗಳು ತಮ್ಮ ದಿನನಿತ್ಯದ ಆಹಾರದಲ್ಲಿ ಬಳಸುವ ಕಾಳುಗಳೇ ಧಾನ್ಯಗಳು. ಇವುಗಳಲ್ಲಿ ಏಕದಳ ಧಾನ್ಯಗಳು ಮತ್ತು ದ್ವಿದಳ ಧಾನ್ಯಗಳೆಂದು ಎರಡು ವಿಧ : 1. ಏಕದಳ ಧಾನ್ಯಗಳು-ಇವುಗಳಲ್ಲಿ ಒಂದೇ ಬೀಜದಳ ಇರುತ್ತದೆ. ಈ ಗುಂಪಿನ ಧಾನ್ಯಗಳಲ್ಲಿ ಮುಖ್ಯವಾದವು ಬತ್ತ, ರಾಗಿ, ಜೋಳ, ಗೋದಿ, ನವಣೆ, ಸಜ್ಜೆ ಮತ್ತು ಮುಸುಕಿನ ಜೋಳ. ಏಕದಳ ಧಾನ್ಯಗಳಲ್ಲಿ ಪಿಷ್ಟದ ಮೊತ್ತ ಮತ್ತು ಶಕ್ತಿ (ಕ್ಯಾಲೊರಿ) ಹೆಚ್ಚಾಗಿರುತ್ತದೆ. ಸಾಮಾನ್ಯವಾಗಿ ಇವುಗಳಲ್ಲಿನ ಪಿಷ್ಟದ ಮೊತ್ತ 70%ರಿಂದ 80%ರಷ್ಟು ಇರುತ್ತದೆ. ಬಾರ್ಲಿ ಮತ್ತು ಬತ್ತದಲ್ಲಿ ಹೊಟ್ಟು ಇರುವುದರಿಂದ ಪಿಷ್ಟಾಂಶ ಕಡಿಮೆ. ಏಕದಳ ಧಾನ್ಯಗಳು ಮನುಷ್ಯನ ಪ್ರಮುಖ ಆಹಾರ. ಚೀನ ಮತ್ತು ರಷ್ಯಗಳ ಬಿಟ್ಟು ಪ್ರಪಂಚದ ಇತರ ರಾಷ್ಟ್ರಗಳ ಒಟ್ಟು ಬಳಕೆಯ ಅರ್ಧದಷ್ಟು ಶಕ್ತಿ  ಏಕದಳ ಧಾನ್ಯಗಳಿಂದ ಒದಗುತ್ತದೆ. ಉಳಿದ ಅರ್ಧದಲ್ಲಿ ಕಾಲುಭಾಗ ಇತರ ಬೆಳೆಗಳಿಂದಲೂ ಕಾಲುಭಾಗ ಪ್ರಾಣಿಗಳ ಮೂಲಕ ಲಭಿಸುವುವು. ಈ ಧಾನ್ಯಗಳಿಂದ ದಿನನಿತ್ಯದ ಆಹಾರವಾದ ಅನ್ನ, ಚಪಾತಿ, ರೊಟ್ಟಿ, ಇಡ್ಲಿ, ದೋಸೆ, ಪೂರಿ, ಬ್ರೆಡ್, ಮುಂತಾದುವನ್ನು ತಯಾರಿಸಲಾಗುತ್ತದೆ. ಮಾದಕ ಪಾನೀಯಗಳು, ಕೈಗಾರಿಕಾ ಆಲ್ಕೊಹಾಲ್, ಪಿಷ್ಟ, ಸೆಲ್ಯೂಲಾಯ್ಡ್ ಮತ್ತು ಕೆಲವು ಪಾಲಿಮರ್ ಮೂಲ ಧಾತುಗಳನ್ನು ತಯಾರಿಸಲು ಕೆಲವು ಧಾನ್ಯಗಳನ್ನು ಬಳಸುವುದಿದೆ.

	2. ದ್ವಿದಳ ಧಾನ್ಯಗಳು-ಇವುಗಳಲ್ಲಿ ಎರಡು ಬೀಜದಳಗಳುಂಟು. ಈ ಗುಂಪಿನಲ್ಲಿ ಮುಖ್ಯವಾದವು ತೊಗರಿ, ಅವರೆ, ಅಲಸಂದಿ, ಕಡಲೆ, ಹೆಸರು, ಉದ್ದು, ಸೋಯಾಬೀನ್ಸ್ಸ್, ಹುರುಳಿ ಮತ್ತು ಬಟಾಣಿ. ದ್ವಿದಳ ಧಾನ್ಯಗಳಲ್ಲಿ ಪ್ರೋಟೀನ್ ಮತ್ತು ಕೊಬ್ಬು ಹೆಚ್ಚಾಗಿರುತ್ತದೆ. ಮನುಷ್ಯನ ಆಹಾರದಲ್ಲಿ ದ್ವಿದಳ ಧಾನ್ಯಗಳಿಗೆ ಎರಡನೆಯ ಸ್ಥಾನ. ಈ ಧಾನ್ಯಗಳಿಂದ ಸಾರು, ಹುಳಿ, ದೋಸೆ, ವಡೆ, ಕೋಸಂಬರಿ, ಗುಗ್ಗುರಿ, ಮತ್ತು ಹಲವು ಸಿಹಿ ಪದಾರ್ಥಗಳನ್ನು ತಯಾರಿಸುವುದಿದೆ.

	ಧಾನ್ಯಗಳನ್ನು ಕೊಯ್ದಾದ ಮೇಲೆ ಚೆನ್ನಾಗಿ ಒಣಗಿಸಿ ಶೇಖರಿಸಿಡಬೇಕಾಗುತ್ತದೆ. ಕೆಲವು ಧಾನ್ಯಗಳನ್ನು ಪೂರ್ತಿ ಬೆಳೆಕೊಯ್ದು ತೆನೆಗಳನ್ನು ಬೇರ್ಪಡಿಸಿ ಒಣಗಿಸಿ ಅನಂತರ ಒಕ್ಕುವುದಿದೆ. ಕೆಲವನ್ನು ಒಕ್ಕಿದ ಮೇಲೆ ಒಣಗಿಸುವುದುಂಟು. ಕಾಳುಗಳನ್ನು ಒಣಗಿಸಲು ಅನೇಕ ವಿಧಾನಗಳುಂಟು : ಬಿಸಿಲಿನಲ್ಲಿ ಒಣಗಿಸುವುದು, ನೆರಳಿನಲ್ಲಿ ಒಣಗಿಸುವುದು, ಕೊಠಡಿಗಳಲ್ಲಿ ಬಿಸಿಗಾಳಿ ಹಾಯಿಸಿ ಒಣಗಿಸುವುದು, ವಿದ್ಯುಚ್ಛಕ್ತಿಯ ಬಳಕೆಯಿಂದ ಒಣಗಿಸುವುದು. ಒಣಗಿಸಿದ ಅನಂತರ ಧಾನ್ಯಗಳಿಂದ ಕಸಕಡ್ಡಿ, ಕಲ್ಲು ಮಣ್ಣು, ಕಳೆ ಬೀಜಗಳನ್ನು ಬೇರ್ಪಡಿಸಿ ಸಂಗ್ರಹಿಸಿಡಲಾಗುವುದು. ಸಂಗ್ರಹವೇಳೆಯಲ್ಲಿ ಒಂದು ನಿರ್ದಿಷ್ಟ ಪ್ರಮಾಣಕ್ಕಿಂತ ಹೆಚ್ಚು ತೇವವಿದ್ದರೆ, ಶಾಖ ಉತ್ಪತ್ತಿಯಾಗಿ ಕ್ರಿಮಿಕೀಟಗಳು ಹೆಚ್ಚಾಗುವುವಲ್ಲದೆ, ಬೂಷ್ಟು ಬರುವ ಸಂಭವವೂ ಉಂಟು. ಅದನ್ನು ತಪ್ಪಿಸಲು ಧಾನ್ಯಗಳನ್ನು ಶಿಫಾರಸು ಮಾಡಿದ ರಾಸಾಯನಿಕಗಳಿಂದ ಸಂಸ್ಕರಿಸಲಾಗುವುದು.
(ಕೆ.ಆರ್.ಜಿಎ.)

	ಧಾನ್ಯಗಳ ಸಂಗ್ರಹಣೆ : ಧಾನ್ಯಗಳನ್ನು ಆಹಾರಕ್ಕಾಗಲಿ ಇಲ್ಲವೇ ಬಿತ್ತನೆಗಾಗಲಿ ಉಪಯೋಗಿಸುವಾಗ ಯೋಗ್ಯ ರೀತಿಯಲ್ಲಿ ಸಂಗ್ರಹ ಮಾಡದಿದ್ದರೆ ಇಲಿ, ಕೀಟ ಇತ್ಯಾದಿಗಳಿಂದ ಅವು ಕೆಟ್ಟುಹೋಗುವ ಸಂಭವವುಂಟು. ಹೀಗೆ ಧಾನ್ಯಗಳಲ್ಲಿ ಬೀಳುವ ಕೀಟಗಳಲ್ಲಿ ಮುಖ್ಯ ರೀತಿಯ ಕೆಲವನ್ನು ವಿವರಿಸಲಾಗಿದೆ :

	ಜೀರುಂಡೆಗಳು ಮತ್ತು ಚಿಟ್ಟೆ ಹುಳುಗಳು : 1 ವಾಡೆಹುಳು (ಸಿಟೊಫಿಲಿಸ್ ಒರೈeóÉೀ ಅಥವಾ ಕ್ಯಾಲಾಂಡ್ರಾ ಒರೈeóÉೀ) : ಇದು ಅಕ್ಕಿಯನ್ನು ಹಾಳುಮಾಡುತ್ತದೆ. ಈ ಹುಳುವಿನ ಮೂತಿ ಉದ್ದವಾಗಿದೆಯಲ್ಲದೆ ಇದರಲ್ಲಿ ಕೊರೆಯಲು ನೆರವಾಗುವ ಬಲವಾದ ದವಡೆಯುಂಟು. ಹುಳುವಿನ ಬಣ್ಣ ಕೆಂಪು ಮಿಶ್ರಿತ ಕಂದು ಅಥವಾ ಶುದ್ಧ ಕಂದು. ಮರಿವಾಡೆಹುಳುಗಳು ಧಾನ್ಯವನ್ನು ಚೆನ್ನಾಗಿತಿಂದು, ಸೊಕ್ಕಿದ ಮೇಲೆ ಕೋಶಾವಸ್ಥೆಯನ್ನು ತಾಳುತ್ತದೆ. ಅನಂತರ ಹೊರಬರುವ ಜೀರುಂಡೆಗಳು ಧಾನ್ಯವನ್ನು ಹಾಳು ಮಾಡುತ್ತವೆ.

	2 ಕಾಳನ್ನು ಕೊರೆಯುವ ಜೀರುಂಡೆಹುಳು (ರೈಜೋಪೆರ್ತಾ ಡೊಮಿನಿಕ) : ಇದು ವಿಶೇಷವಾಗಿ ಗೋದಿಯನ್ನು ಕೊರೆದು ತಿನ್ನುತ್ತದೆ. ಈ ಕೀಟದ ಬಣ್ಣ ಕಪ್ಪು ಅಥವಾ ಕಡುಕಂದು. ಇದರ ಉದ್ದ ಸುಮಾರು 1/8". ವಾಡೆಹುಳು ಕೊರೆಯುವ ಧಾನ್ಯವನ್ನೇ ಈ ಜೀರುಂಡೆ ಸಹ ತಿನ್ನುತ್ತದೆ.

	3 ಖಾಪ್ರಜೀರುಂಡೆ (ಟ್ರೋಗೊಡರ್ಮ ಗ್ರ್ಯಾನೇರಿಯ) : ಈ ಜೀರುಂಡೆ ಗೋದಿಯನ್ನೇ ಹೆಚ್ಚಾಗಿ ಹಾಳುಮಾಡುತ್ತದೆ. ಅಕ್ಕಿ, ಜೋಳ ಮತ್ತು ಮುಸುಕಿನ ಜೋಳಗಳನ್ನೂ ಇದು ಹಾಳು ಮಾಡುವುದಿದೆ. ಹುಳು ಅಂಡಾಕಾರದ್ದು. ಇದಕ್ಕೆ ತನ್ನ ತಲೆಯನ್ನು ಹಿಂದಕ್ಕೆ ಸೆಳೆದುಕೊಳ್ಳುವ ಸಾಮಥ್ರ್ಯ ಉಂಟು. ಮರಿಹುಳು ಬೇಳೆ ಮತ್ತು ಕಾಳುಗಳನ್ನು ಹಾಳು ಮಾಡುತ್ತದೆ.

	4 ಟ್ರೈಬೋಲಿಯಮ್ ಕ್ಯಾಸ್ಟೇನಿಯಮ್ : ಇದು ಹಿಟ್ಟು, ಕಾಳುಗಳ ಚೂರು ಮುಂತಾದುವನ್ನು ತಿಂದು ಜೀವಿಸುವ ಕಂದು ಮಿಶ್ರಿತ ಕೆಂಪು ಬಣ್ಣದ ಜೀರುಂಡೆ. ಈ ಜೀರುಂಡೆ ಪೂರ್ಣ ಧಾನ್ಯಗಳನ್ನು ಕೊರೆಯುವುದಿಲ್ಲ. ಅಕ್ಕಿ ತೌಡು, ರವೆ, ಹಿಟ್ಟು ಮತ್ತು ಬಿಸ್ಕತ್ತುಗಳನ್ನು ನಾಶಪಡಿಸುತ್ತದೆ.

	5 ಕಪ್ಪು ಬಣ್ಣದ ಕ್ಯಾಡಿಲ್ (ಟೆನೆಬ್ರಿಯೊನಿಡೀ ಕುಟುಂಬದ ಜೀರುಂಡೆ) : ಈ ಕೀಟದಿಂದ ಅಕ್ಕಿ, ಗೋದಿ ಮತ್ತು ಸಂಬಾರ ಪದಾರ್ಥಗಳ ನಷ್ಟ ಸಂಭವಿಸುತ್ತದೆ. ಹುಳುವಿನ ತಲೆಯೂ ದೇಹವೂ ದೊಡ್ಡ ಗಾತ್ರದವು.

	6 ಗರಗಸದ ಹಲ್ಲುಳ್ಳ ಜೀರುಂಡೆ ಹುಳು (ಒರಿeóÉೀಫಿಲ್ಲಸ್ ಸುರಿನಾಮೆಸ್‍ಸಿಸ್) : ಸಂಸ್ಕರಿಸಿದ ಆಹಾರ ಪದಾರ್ಥಗಳನ್ನು ಮತ್ತು ಹಿಟ್ಟುಗಳನ್ನು ತಿಂದು ಜೀವಿಸುತ್ತದೆ. ಇದು ಚಪ್ಪಟೆಯಾಗಿದ್ದು, ಸ್ವಲ್ಪ ಮಟ್ಟಿಗೆ ಹೇನು ಹುಳುವನ್ನು ಹೋಲುತ್ತದೆ.

	7 ಹುರುಳಿ ಮತ್ತು ಬಟಾಣಿ ಕಾಳುಗಳನ್ನು ಹಾಳು ಮಾಡುವ ಜೀರುಂಡೆ (ಬ್ರೂಕಸ್ ಕೈನೆನ್‍ಸಿಸ್): ಈ ಹುಳು ಹೊಲದಲ್ಲಿರುವ ಕಾಯಿಗಳನ್ನು ಕೊರೆಯಬಲ್ಲದು, ಬೂದು ಮಿಶ್ರಿತ ಕಂದು ಬಣ್ಣದ ಈ ಜೀರುಂಡೆಯ ಮೈಮೇಲೆ ಪಟ್ಟೆಯಾಕಾರದ ತಿಳಿಬಣ್ಣ ಉಂಟು.

	ಚಿಟ್ಟೆ ಹುಳುಗಳು : ಧಾನ್ಯವನ್ನು ನಾಶಮಾಡುವ ಚಿಟ್ಟೆಹುಳುಗಳಲ್ಲಿ ಕಂಬಳಿ ಹುಳುವಿನಾಕಾರದ್ದು ಬಲು ಸಾಮಾನ್ಯ. ಇವು ನಷ್ಟಪಡಿಸಿದ ಧಾನ್ಯವನ್ನು ಸೇವಿಸಿದಲ್ಲಿ ದೇಹಕ್ಕೆ ಕೆಡಕುಂಟಾಗುವ ಸಂಭವವೂ ಉಂಟು.

	ಕೆಲವು ಮುಖ್ಯ ಚಿಟ್ಟೆಹುಳುಗಳು : ಕಿರಿದಾದ, ಹೊಳಪಿನ, ರೆಕ್ಕೆಗಳುಳ್ಳ, ಹುಲ್ಲಿನ ಬಣ್ಣದ ಚಿಟ್ಟೆಯು (ಟೆಟೊಟ್ರೋಗ ಸಿರಿಯಲೆಲ್ಲ), ಸಾಧಾರಣವಾಗಿ ದಾಸ್ತಾನು ಮಾಡಿದ ಬತ್ತವನ್ನು ಇದು ಹಾಳು ಮಾಡುತ್ತದೆ. ಹಲವೊಮ್ಮೆ ಜೋಳವನ್ನೂ ಇದು ಹಾಳು ಮಾಡುವುದುಂಟು. ಈ ಕೀಟಕ್ಕೆ ಕೊರೆಯುವ ಸಾಮಥ್ರ್ಯ ಅಷ್ಟಾಗಿ ಇಲ್ಲ. ಅಕ್ಕಿ ಚಿಟ್ಟೆ ಹುಳು (ಕಾರ್ಸಿನ ಸಿಫೆಲೊನಿಕ) ಬೂದು ಮಿಶ್ರಿತ ಕಂದು ಬಣ್ಣದ ಹುಳು. ಸಂಸ್ಕರಿಸಿದ ಪದಾರ್ಥಗಳು, ಒಣಗಿದ ಹಣ್ಣುಗಳು, ಎಣ್ಣೆಬೀಜ, ಹಿಂಡಿ ಮುಂತಾದುವನ್ನು ಇದು ನಾಶ ಮಾಡುವುದು. ಬಾಲ ಹುಳುವೆಂಬ ಬಳಕೆಯ ಹೆಸರಿನ ಅಂಜೂರದ ಚಿಟ್ಟೆಹುಳು (ಎಫಿಸ್ಟಿಯ ಕಾಟೆಲ) ಎಣ್ಣೆ ಬೀಜಗಳು, ಹಿಂಡಿ, ಹಿಟ್ಟುಗಳನ್ನು ತಿಂದು ಜೀವಿಸುತ್ತದೆ. ಈ ಹುಳುವಿನಿಂದ ಗಿರಣಿಗಳಲ್ಲಿ ಯಂತ್ರಗಳ ಕೆಲಸಕ್ಕೆ ಅಡ್ಡಿಯಾಗುವುದುಂಟು. ಒಡೆದ ಧಾನ್ಯಗಳು ಮತ್ತು ಹಿಟ್ಟುಗಳನ್ನು ನಾಶಪಡಿಸುವ, ಅಗಲ ರೆಕ್ಕೆಗಳನ್ನುಳ್ಳ, ಸುಂದರವಾದ ಇನ್ನೊಂದು ಚಿಟ್ಟೆ ಇಂಡಿಯನ್ ಮೀಲ್ ಮಾತ್ (ಪ್ಲಾಡಿಯ ಇಂಟರ್ ಪಂಕ್ಟೆಲ್ಲ). ಇದರ ಮರಿಹುಳು ತಾನು ತಿಂದು ನಷ್ಟಪಡಿಸುವ ಧಾನ್ಯದ ಬಣ್ಣವನ್ನೇ ತಾಳುತ್ತದೆ. `ಮೀಲ್ ಸ್ನೌಟ್ ಮಾತ್ (ಪೈರಾಲಿಡೀ ಕುಟುಂಬಕ್ಕೆ ಸೇರಿದೆ) ಎಂಬ ಚಿಟ್ಟೆಹುಳುವಿಗೆ ಉದ್ದನೆಯ ಮೂತಿಯುಂಟು. ಒಣಹುಲ್ಲು ತೌಡು, ಆಲೂಗೆಡ್ಡೆ, ಸಾಸಿವೆ, ಕೊತ್ತಂಬರಿ, ಸಬ್ಬಕ್ಕಿ, ಜೀರಿಗೆ ಮುಂತಾದ ಪದಾರ್ಥಗಳನ್ನು ಇದು ತಿನ್ನುತ್ತದೆ.

	ಇತರ ಕೀಟಗಳು : ಜಿರಲೆ, ಮಿಡತೆ, ಇರುವೆ ಮತ್ತು ಗೆದ್ದಲು ಹುಳುಗಳು ಕೂಡ ಆಹಾರ ಧಾನ್ಯಗಳನ್ನು ನಾಶಮಾಡುವುವು. ಜಿರಲೆಗಳಿಗೆ ಸಾಧಾರಣವಾಗಿ ಪಿಷ್ಟವುಳ್ಳ ಯಾವುದೇ ಪದಾರ್ಥವೆಂದರೆ ಬಹಳ ಮೆಚ್ಚು. ಈ ಅಂಶವನ್ನುಳ್ಳ ಆಹಾರ ಪದಾರ್ಥ ಯಾವುದೇ ರೂಪದಲ್ಲಿರಲಿ ಅದನ್ನು ಜಿರಲೆ ನಾಶಪಡಿಸುತ್ತದೆ. ಇರುವೆಗಳು ಎಲ್ಲ ಬಗೆಯ ಪದಾರ್ಥಗಳನ್ನೂ ತಿನ್ನುತ್ತವೆ. ಕೊಬ್ಬು, ಹಿಂಡಿ, ತರಕಾರಿಯ ಬೇರು, ಸಿಹಿ ಪದಾರ್ಥ, ಕಾಳು ಇವೇ ಮುಂತಾದುವನ್ನು ಇವು ಹಾಳು ಮಾಡುವುವು. ಮಿಡತೆಗಳಿಗೆ ಹೆಚ್ಚು ಕಡಿಮೆ ಜಿರಲೆಯ ಸ್ವಭಾವವೇ ಉಂಟು. ದವಸಧಾನ್ಯಗಳು, ಬ್ರೆಡ್, ಬಿಸ್ಕತ್ತು, ಹಿಟ್ಟುಗಳನ್ನು ಇವು ನಾಶಮಾಡುವುವು.

	ಕೀಟಗಳಿಗೆ ಅನುಕೂಲ ಪರಿಸ್ಥಿತಿಗಳು : ಈ ವಿನಾಶಕಾರಿ ಕೀಟಗಳು, ಸಾಮಾನ್ಯವಾಗಿ ದಾಸ್ತಾನು ಮಾಡಿರುವ ಆಹಾರ ವಸ್ತುಗಳನ್ನೇ ನಷ್ಟ ಪಡಿಸುವುವು. ಇದರಲ್ಲಿ ಗಮನಾರ್ಹವಾದ ಅಂಶವೆಂದರೆ ದಾಸ್ತಾನು ಮಾಡಿರುವ ಪ್ರದೇಶದ ಒಳಗಿನ ಹಾಗೂ ಹೊರಗಿನ ಪರಿಸ್ಥಿತಿಗಳನ್ನು ಕೀಟಗಳ ಬೆಳೆವಣಿಗೆ ಹಾಗೂ ವೃದ್ಧಿಗಳು ಅವಲಂಬಿಸಿವೆ. ಮೊದಲೇ ಸ್ವಲ್ಪಮಟ್ಟಿಗೆ ಕೀಟಗಳು ಇರುವೆಡೆಯಲ್ಲಿ ಆಹಾರ ಪದಾರ್ಥವನ್ನು ಪುನಃ ದಾಸ್ತಾನು ಮಾಡಿದರಂತೂ ತೀವ್ರವಾಗಿ ಅವುಗಳ ಸಂಖ್ಯೆ ಅಧಿಕವಾಗುವುದು. ಗಾಳಿ ಸರಾಗವಾಗಿ ಸಂಚರಿಸದಿರುವ, ಹೆಚ್ಚು ಉಷ್ಣತೆ ಮತ್ತು ತೇವಾಂಶಗಳಿರುವ (8%ರಿಂದ 10%ರ ಮೇಲೆ) ಜಾಗದಲ್ಲಿ ಕೀಟಗಳ ಸತತ ಅಭಿವೃದ್ಧಿಗೆ ತಡೆಯಿಲ್ಲ. ಸಮಂಜಸವಾದ ಸಾಗಾಣಿಕೆ ವ್ಯವಸ್ಥೆಯಿಲ್ಲದಿದ್ದರೆ ಅಥವಾ ಕೊಯ್ಲಾದ ಬೆಳೆಗಳನ್ನು ಕೂಡಲೇ ಸಾಗಿಸದಿದ್ದರೆ ಇವುಗಳ ಹಾವಳಿಗೆ ನೆರವಾದಂತಾಗುವುದು.

	ಧಾನ್ಯದ ಒಳಗಿನ ಸತ್ವವನ್ನೆಲ್ಲ ಕೀಟವು ಕೊರೆಯುವುದರಿಂದ ಹಲವು ಬಾರಿ ಕೇವಲ ಸಿಪ್ಪೆ ಮಾತ್ರ ಉಳಿಯುವುದು. ಕೆಲವು ವೇಳೆ ಧಾನ್ಯ ಪುಡಿಪುಡಿಯಾಗಿ, ರೂಪಪರಿವರ್ತನೆಯ ಕಾಲದಲ್ಲಿ ಕೀಟ ವರ್ಜಿಸಿದ ಮೇಲುಹೊದಿಕೆ, ಸತ್ತುಹೋದ ಕೀಟಗಳು, ಕೀಟಗಳ ವಿಸರ್ಜನೆ-ಇವುಗಳೊಡನೆ ಬೆರೆತು ಒಂದು ಮಿಶ್ರಣವೇ ಉಂಟಾಗುವುದು. ಈ ವಿಧವಾದ ಧಾನ್ಯದ ಸೇವನೆಯಿಂದ ಅನಾರೋಗ್ಯ ತಪ್ಪದು.

	ಆಹಾರ ಧಾನ್ಯಗಳನ್ನು ಸಂಗ್ರಹ ಮಾಡಲು ಬಗೆಬಗೆಯ ಸಾಧನಗಳನ್ನು ರಚಿಸಲಾಗುತ್ತದೆ. ಅಧಿಕ ಮೊತ್ತದಲ್ಲಿ ಧಾನ್ಯವನ್ನು ಸಂಗ್ರಹಿಸಬಹುದಾದ ರಚನೆಗಳಲ್ಲಿ ಹೆಚ್ಚು ಅನುಕೂಲಗಳಿರುವುದು ಕಂಡುಬಂದಿದೆ. ಏಕೆಂದರೆ ಕೀಟದ ಹಾವಳಿಯನ್ನು ಆದಷ್ಟು ಮಟ್ಟಿಗೆ ತಡೆಗಟ್ಟಬಹುದಾದ ಸೌಲಭ್ಯವನ್ನು ಇವುಗಳಲ್ಲಿ ಕಲ್ಪಿಸಿಕೊಳ್ಳಬಹುದು. ಹೆಚ್ಚು ಸಂಖ್ಯೆಯಲ್ಲಿ ಗೋಣಿ ಚೀಲಗಳು ಈ ರೀತಿಯ ಸಂಗ್ರಹಣೆಗೆ ಬೇಕಿಲ್ಲ. ಅಲ್ಲದೆ ಆಗಾಗ್ಗೆ ಕಾಳನ್ನು ತೆಗೆದು ಪರೀಕ್ಷಿಸಬಹುದು. ಕೆಲವು ಬಗೆಗಳಲ್ಲಿ, ಹೊಸದಾದ ಮತ್ತು ಹಳೆಯ ಧಾನ್ಯವನ್ನು ಬೇರೆಬೇರೆಯಾಗಿ ದಾಸ್ತಾನು ಮಾಡುವ ಅನುಕೂಲವೂ ಉಂಟು. ಎಲ್ಲಕ್ಕಿಂತ ಮಿಗಿಲಾಗಿ ದಾಸ್ತಾನು ಮಾಡಬೇಕೆಂದಿರುವ ಜಾಗದಲ್ಲಿ ಕೀಟಗಳಿದ್ದರೆ ಮುಂಚಿತವಾಗಿಯೇ ಅವುಗಳನ್ನು ನಾಶ ಮಾಡಲು ಸಾಧ್ಯ.

	ಕೆಲವು ವಿಧಾನಗಳ ಸ್ಥೂಲ ಪರಿಚಯ : ನೆಲಮಟ್ಟದಿಂದ ಕೆಳಗೆ ಕಟ್ಟುವ ಉಗ್ರಾಣಗಳಲ್ಲಿ `ಖಟ್ಟೆ (ಹಗೇವು) ಎಂಬುದು ಸಾಮಾನ್ಯವಾಗಿ ಬಳಕೆಯಲ್ಲಿರುವ ರಚನೆ. ಇದಕ್ಕೆ ಮೇಲೆ ಎಂದರೆ, ನೆಲಮಟ್ಟದಲ್ಲಿ 2.5' ವ್ಯಾಸದಷ್ಟು ತೆರವಾದ ಜಾಗವನ್ನು ಬಿಟ್ಟಿರುತ್ತಾರೆ. ರಚನೆಯು 15'-16' ಆಳವಿರುತ್ತದೆ. ಇದರಲ್ಲಿ 600 ರಿಂದ 800 ಮಣ ಧಾನ್ಯವನ್ನು ಸಂಗ್ರಹಿಸಿಡಬಹುದು.

	ಮಧ್ಯ ಪ್ರದೇಶದಲ್ಲಿ ಬಳಕೆಯಲ್ಲಿರುವ ಬಾಂಡಾ ಎಂಬುದು ಖಟ್ಟೆಯ ಜಾತಿಗೇ ಸೇರಿದೆ. ಘಟ್ಟ ಪ್ರದೇಶದ ಪೆನ್, ರಾಜಪುಟಾಣದ ಖಾಸ್ ಎಂಬ ರಚನೆಗಳೂ ಹೆಚ್ಚು ಕಡಿಮೆ ಇದೇ ಗುಂಪಿಗೆ ಸೇರಿವೆ. ಸಾಮಾನ್ಯವಾಗಿ ಈ ರಚನೆಗಳಲ್ಲಿ ಧಾನ್ಯಗಳನ್ನು ತುಂಬುವುದಕ್ಕೆ ಮುಂಚಿತವಾಗಿ ಅವುಗಳ ತಳ ಮತ್ತು ಒಳಮೈಯಿನ ಒತ್ತಿಗೆ ಬತ್ತದ ಹೊಟ್ಟನ್ನು ತುಂಬಲಾಗುತ್ತದೆ.

	ಮಣ್ಣಿನ ತೊಟ್ಟಿಗಳನ್ನು (ಬಿನ್ಸ್) ಕಟ್ಟಿ ಧಾನ್ಯವನ್ನು ಸಂಗ್ರಹಿಸುವುದೂ ರೂಢಿಯಲ್ಲಿದೆ. ಇದಕ್ಕೆ ಹಸಿಜೇಡಿಮಣ್ಣು ಮತ್ತು ಒಣಗಿದ ಹುಲ್ಲನ್ನು ಉಪಯೋಗಿಸಲಾಗುತ್ತದೆ. ಬಿಹಾರಿನಲ್ಲಿ ಬಳಕೆಯಿರುವ ಈ ರಚನೆಗೆ `ಕೋಠಿಸ್ ಎನ್ನುವರು. ಇವುಗಳಿಗೆ ಗುಂಡಗಿರುವ ಮುಚ್ಚಳವಿರುತ್ತದೆ. ಕೀಟಗಳನ್ನು ತಡೆಗಟ್ಟುವುದಕ್ಕೆಂದು ಈ ಮುಚ್ಚಳವನ್ನು ಮೊಹರು ಮಾಡುವುದುಂಟು. ಆದರೆ ಈ ರಚನೆಯಲ್ಲಿ ಧಾನ್ಯಗಳನ್ನು ಕಾಪಾಡುವುದು ಅಷ್ಟು ಸುಲಭವಲ್ಲ. ಪಂಜಾಬಿನಲ್ಲಿ `ಭರೋಲಿ ಮತ್ತು `ಕೋಠಿಸ್ ಎರಡೂ ಬಳಕೆಯಲ್ಲಿವೆ. ಸಾಮಾನ್ಯವಾಗಿ ದಿನಬಳಕೆಗೆಂದು ಧಾನ್ಯವನ್ನು ಉಪಯೋಗಿಸುವೆಡೆಯಲ್ಲಿ ಭರೋಲಿಯು ರೂಢಿಯಲ್ಲಿದೆ. ಅಮೃತಸರದಲ್ಲಿ `ಪೆಟ್ಟಿಯನ್ನು ರಚಿಸಿ ಧಾನ್ಯ ಸಂಗ್ರಹಣೆ ಮಾಡುತ್ತಾರೆ.

	ಆಧುನಿಕ ರೀತಿಯಲ್ಲಿ ಸಿಮೆಂಟ್ ಉಪಯೋಗಿಸಿ ಕೆಲವು ವಿಶಿಷ್ಟ ತೊಟ್ಟಿಗಳನ್ನು ನಿರ್ಮಿಸುವುದುಂಟು. ಇಂಥ ರಚನೆಗಳಲ್ಲಿ 100 ರಿಂದ 300 ಮಣ ಧಾನ್ಯವನ್ನು ತುಂಬಬಹುದು. ಮಳೆಗಾಲದ ಅನಂತರ ಆಗಾಗ್ಗೆ ಧಾನ್ಯದಲ್ಲಿ ಕೈಯಾಡಿಸುತ್ತಿದ್ದರೆ ಕೀಟಗಳ ಹಾವಳಿಯನ್ನು ತಡೆಗಟ್ಟಬಹುದು. ಪಂಜಾಬಿನಲ್ಲಿ ಕೊಠಡಿಗಳ ಒಂದು ಭಾಗವನ್ನೇ `ಬುಖಾರಿ' ಗಳಾಗಿ ಪರಿವರ್ತಿಸಿ ಧಾನ್ಯವನ್ನು ಸಂಗ್ರಹಿಸಿಡುವುದೂ ಉಂಟು.

	ಕೇವಲ ಹುಲ್ಲಿನಿಂದಲೇ ನಿರ್ಮಿಸಿದ ರಚನೆಗಳಲ್ಲಿ ಧಾನ್ಯವನ್ನು ಸಂಗ್ರಹಿಸಿಡುವುದೂ ಕೆಲವೆಡೆಗಳಲ್ಲಿ ವಾಡಿಕೆಯಲ್ಲಿದೆ. ಬಂಗಾಳದಲ್ಲಿ ಇದಕ್ಕೆ `ಪುರಾ ಎಂಬ ಹೆಸರಿದೆ. ಇವುಗಳಲ್ಲಿ 4 ರಿಂದ 16 ಮಣ ಧಾನ್ಯವನ್ನು ಇಡಬಹುದು. ಬಿಹಾರ್ ಹಾಗೂ ಒರಿಸ್ಸದಲ್ಲಿ ಹುಲ್ಲಿನಲ್ಲಿ ಕಾಳನ್ನು ಸಂಗ್ರಹಿಸಿ ಚೆನ್ನಾಗಿ ಸುತ್ತಿ ಕಟ್ಟಿಡುವರು. ದಟ್ಟವಾದ ಹುಲ್ಲಿನ ಭಾಗದ ಸುತ್ತ ದೃಢವಾದ ಹಗ್ಗವನ್ನು ಬಿಗಿದು, ಮೋರೈ ಎಂಬ ಹುಲ್ಲಿನ ತೊಟ್ಟಿಗಳನ್ನು ರಚಿಸುವುದೂ ಬಂಗಾಳದಲ್ಲಿ ಸಾಧಾರಣವಾಗಿದೆ. ಆದರೆ ಹುಲ್ಲಿನ ಈ ರಚನೆಗಳಲ್ಲಿ ಧಾನ್ಯವನ್ನು ಸುರಕ್ಷಿತವಾಗಿಡುವುದು ಪ್ರಯಾಸಕರವೆನ್ನಲಾಗಿದೆ.

	ಬಿದಿರಿನ ಚಾಪೆ ಅಥವಾ ಹೆಣಿಗೆ ಮತ್ತು ಇತರ ಕೆಲವು ಸಸ್ಯಗಳ ಕಡ್ಡಿಗಳನ್ನು ಸೇರಿಸಿ ತೊಟ್ಟಿಗಳನ್ನು ಕಟ್ಟುವುದುಂಟು. ಅವುಗಳ ಒಳಮೈ ಹಾಗೂ ಹೊರಮೈಯಿಗೆ ಸಗಣಿಯನ್ನು ಮೆತ್ತಲಾಗುತ್ತದೆ. ಹಲವು ಬಾರಿ ನೆಲದ ಮೇಲೆ ಇವುಗಳನ್ನು ಕಟ್ಟುವುದಿದೆಯಾದರೂ ಇದಕ್ಕೆಂದೇ ಬೇರೆ ತಳವನ್ನು ಕಲ್ಪಿಸಿಕೊಳ್ಳುವುದೂ ಉಂಟು. ಆದರೆ ಈ ರಚನೆಗಳಲ್ಲಿ ಕೀಟಗಳ ಹಾವಳಿಯನ್ನು ತಪ್ಪಿಸುವುದು ಸಾಧ್ಯವಾಗಲಾರದು.

	ಮಣ್ಣಿನಿಂದ ದೊಡ್ಡದಾದ ಜಾಡಿ ಅಥವಾ ಹಂಡೆಗಳಂಥ ಕೋಶಗಳನ್ನು ನಿರ್ಮಿಸಿ ಅವುಗಳಲ್ಲಿ ಧಾನ್ಯವನ್ನು ತುಂಬಿಡುವುದೂ ರೂಢಿಯಲ್ಲಿದೆ. ಇವನ್ನು ಹಲವಾರು ಆಕೃತಿ ಹಾಗೂ ಗಾತ್ರಗಳಲ್ಲಿ ನಿರ್ಮಿಸುವುದಿದೆ. ಈ ಜಾಡಿ ಅಥವಾ ಹಂಡೆಗಳ ಮುಚ್ಚಳವನ್ನು ಧಾನ್ಯ ತುಂಬಿದ ಮೇಲೆ ಮೊಹರು ಮಾಡಲಾಗುವುದು.

	ಸೀಮೆ ಎಣ್ಣೆ ಡಬ್ಬಿ, ಎಣ್ಣೆಯನ್ನು ತುಂಬಿಡುವ ದೊಡ್ಡ ದೊಡ್ಡ ಕೊಳಗ ಪಾತ್ರೆಗಳಲ್ಲಿ ಸಹ ಧಾನ್ಯವನ್ನು ಸಂಗ್ರಹಿಸಿಡಬಹುದು. ಇವು ತೇವಾಂಶವನ್ನು ಹೀರುವುದಿಲ್ಲ ಮತ್ತು ಸಗಣಿ ಮುಂತಾದ ಪದಾರ್ಥಗಳನ್ನು ಉಪಯೋಗಿಸಿ ಮಾಡುವ ಅನಾರೋಗ್ಯಕರ ರೀತಿಯ ಸಂಗ್ರಹಣೆಯನ್ನು ತಪ್ಪಿಸಬಹುದು.

	ಕೆಲವು ಕಡೆಗಳಲ್ಲಿ ಸರ್ಕಾರದವರೇ ದೊಡ್ಡ ದೊಡ್ಡ ಉಗ್ರಾಣವನ್ನು ಕಟ್ಟಿಸಿ, ಆಹಾರ ಧಾನ್ಯಗಳನ್ನು ಶೇಖರಿಸುವುದಿದೆ. ಬೇಕೆನಿಸಿದಾಗ ಈ ಉಗ್ರಾಣಗಳ ತುದಿಗೆ ಹತ್ತಿಹೋಗುವ ಸೌಲಭ್ಯ ಉಂಟು. ನೀರನ್ನು ಸಂಗ್ರಹಿಸುವ ತೊಟ್ಟಿಯಂತಿರುವ ಈ ರಚನೆಗಳಲ್ಲಿ 10,000 ಮಣಗಳಷ್ಟು ಧಾನ್ಯವನ್ನು ಸಂಗ್ರಹಿಸಬಹುದು.

	1,00,000-5,00,000 ಮಣಗಳಷ್ಟು ಭಾರಿ ಮೊತ್ತದಲ್ಲಿ ಧಾನ್ಯಗಳನ್ನು ಸಂಗ್ರಹಿಸುವುದಕ್ಕೆ ಕೂಡ ಅಮೆರಿಕಾದಲ್ಲಿ ಮೇಲೆತ್ತಿಗೆ (ಎಲಿವೇಟರ್ಸ್) ಎಂಬ ಸೌಕರ್ಯವನ್ನು ಕಲ್ಪಿಸಿಕೊಂಡಿದ್ದಾರೆ.  ಇಂಥ ಉಗ್ರಾಣಗಳಿಗೆ ಧಾನ್ಯವನ್ನು ತುಂಬುವ ಮೊದಲು ಅದನ್ನು ಯಾಂತ್ರಿಕವಾಗಿ ಶುದ್ಧಿಗೊಳಿಸಿ, ತೇವವಿಲ್ಲದಂತೆ ಒಣಗಿಸಿ ತೂಗಬಹುದು.  ಒಂದುವೇಳೆ ಕೀಟವೇನಾದರೂ ಆಗಲೇ ಮನೆ ಮಾಡಿಕೊಂಡಿದ್ದಲ್ಲಿ ವೈಜ್ಞಾನಿಕ ವಿಧಾನಗಳಿಂದ ಆಗಿಂದಾಗ್ಗೆ ಧಾನ್ಯವನ್ನು ಶುದ್ಧಿಗೊಳಿಸುವುದರ ಮೂಲಕ ಆ ಜೀವಿಗಳ ವೃದ್ಧಿಯನ್ನು ತಡೆಗಟ್ಟಬಹುದು.  ಮಳೆಗಾಳಿಗಳ ಅಪಾಯದಿಂದ ಧಾನ್ಯವನ್ನು ಸುರಕ್ಷಿತವಾಗಿಡಬಹುದು ಜೊತೆಗೆ ವರ್ತಕ ಮಾಲನ್ನು ಬೇಕೆನ್ನಿಸಿದಾಗ ತೆಗೆದು ಮಾರಬಹುದು.
ಚೀಲಗಳಲ್ಲಿ ಸಂಗ್ರಹಣೆ :  ಚೀಲಗಳಲ್ಲಿ ಧಾನ್ಯಗಳನ್ನು ಸಂಗ್ರಹಿಸುವದರಲ್ಲಿ ಅನುಕೂಲ, ಅನಾನುಕೂಲಗಳೆರಡೂ ಇವೆ.  ಚೀಲಗಳ ಸಾಗಾಣಿಕೆ ಸರಳ.  ಕೀಟಗಳ ಹಾವಳಿಗೆ ಒಳಪಟ್ಟ ಧಾನ್ಯದಿಂದ ಆರೋಗ್ಯಕರವಾದ ಧಾನ್ಯವುಳ್ಳ ಚೀಲವನ್ನು ಸುಲಭವಾಗಿ ಬೇರ್ಪಡಿಸಬಹುದು.  ಆದರೆ ಕೀಟಗಳಿರುವ ಚೀಲಗಳನ್ನು ಉಳಿದ ಚೀಲಗಳ ಜೊತೆಯಲ್ಲಿ ಪೇರಿಸಿಡುವುದು ಅಪಾಯಕಾರಿ.  ಕೀಟಗಳ ದಾಳಿಗೂ ಮತ್ತು ಸಂತಾನೋತ್ಪತ್ತಿಗೂ ಇದು ಅನುಕೂಲವಾದ ಸನ್ನಿವೇಶವಾಗಿ ಪರಿಣಮಿಸುವುದು. ಹಲವು ಸುಧಾರಿತ ವಿಧಾನಗಳನ್ನು ಅಳವಡಿಸಿಕೊಂಡು ಚೀಲಗಳಲ್ಲಿ ಧಾನ್ಯಗಳನ್ನು ಸುರಕ್ಷಿತವಾಗಿ ಸಂಗ್ರಹಿಸಿಡುವುದು ಸಾಧ್ಯವಿದೆ. 
ಕೀಟನಾಶಕ ವಿಧಾನಗಳು :  ಪಾದರಸವನ್ನು ಸ್ವಲ್ಪ ಪ್ರಮಾಣದಲ್ಲಿ ಹಸಿಸಗಣಿಯ ಜೊತೆಗೆ ಸೇರಿಸಿ, ಒಣಗಿಸಿ ಪುಡಿಮಾಡಿ ಆ ಪುಡಿಯನ್ನು ಧಾನ್ಯದ ರಾಶಿಯೊಡನೆ ಬೆರೆಸಿ 3-4 ವರ್ಷಗಳ ಕಾಲ ದಾಸ್ತಾನು ಮಾಡುವ ಸಾಂಪ್ರದಾಯಿಕ ಪದ್ಧತಿ ಇದೆ.  ಧಾನ್ಯರಾಶಿಯನ್ನು ಒಣಗಿಸಿದ ಬೇವಿನ ಸೊಪ್ಪಿನ ಎಲೆಗಳಿಂದ ಮುಚ್ಚಿ ಕೂಡಿಡುವುದೂ ಉಂಟು.  ಮತ್ತೆ ಕೆಲವು ಕಡೆ ಕಣಜದ ಅರ್ಧಭಾಗ ಭೂಮಿಯ ಮೇಲೂ ಅರ್ಧಭಾಗ ನೆಲದ ಒಳಗೂ ಇರುವಂತೆ ರಚಿಸಿ, ಬೂದಿ ಹಾಗೂ ಹರಳೆಣ್ಣೆಯ ಮಿಶ್ರಣವನ್ನು ಧಾನ್ಯಗಳಿಗೆ ಬೆರೆಸಿ ಶೇಖರಿಸಿಡುವ ಕ್ರಮ ಉಂಟು.  ಸಾಧಾರಣವಾಗಿ ಬೇಳೆ (ಮುಖ್ಯವಾಗಿ) ತೊಗರಿ ಕಾಳುಗಳಿಗೆ ಕೆಮ್ಮಣ್ಣಿನ ಲೇಪನಮಾಡಿ ಸಂಗ್ರಹಿಸುವುದೂ ಉಂಟು.

ಹುಲ್ಲಿನಿಂದ ತಯಾರಿಸಿದ ದಪ್ಪ ಹಗ್ಗಗಳಿಂದ ಮೂಡೆಗಳನ್ನು ರಚಿಸಿ, ಅದರಲ್ಲಿ ಬತ್ತವನ್ನು ಸಂಗ್ರಹಿಸಿ ಹುಲ್ಲಿನಿಂದಲೇ ಮುಚ್ಚಿದರೆ ಅದು ಉತ್ತಮ ಬೀಜದ ಬತ್ತವಾಗುವುದೆಂದು ಸಾಂಪ್ರದಾಯಿಕ ಭಾವನೆಯಾಗಿದೆ.  ಬೀಜಕ್ಕೋಸ್ಕರ ಉಪಯೋಗಿಸುವ ಕಾಳುಗಳ ಭ್ರೂಣ ಹಾಳಾಗದಂತೆ ಅಥವಾ ನಷ್ಟವಾಗದಂತೆ ಮುನ್ನೆಚ್ಚರಿಕೆಯ ಕ್ರಮಗಳನ್ನು ಕೈಗೊಳ್ಳಬೇಕು.  ಗ್ರಾಮಾಂತರ ಪ್ರದೇಶಗಳಲ್ಲಿ ಬೀಜದ ಕಾಳುಗಳನ್ನು ಸುಟ್ಟ ಬತ್ತದ ಹೊಟ್ಟಿನೊಳಗೆ ಮುಚ್ಚಿಡುವರು.

ರಾಸಾಯನಿಕ ಕ್ರಿಮಿಕೀಟನಾಶಕಗಳು: ಆಹಾರ ಧಾನ್ಯಗಳನ್ನು ಕ್ರಿಮಿಕೀಟಗಳ ಹಾವಳಿಯಿಂದ ಪಾರುಮಾಡಲು ವೈಜ್ಞಾನಿಕವಾಗಿ ಈಗ ಸಾಧ್ಯವಾಗಿದೆ.  ಇದಕ್ಕಾಗಿ ಹಲವಾರು ರಾಸಾಯನಿಕ ಮಿಶ್ರಣಗಳನ್ನು, ಎರಡು ದೃಷ್ಟಿಗಳಿಂದ ನಿಯೋಗಿಸಲಾಗಿದೆ. ಕೀಟನಾಶಕ ರಾಸಾಯನಿಕ ದಾಸ್ತಾನಿನಲ್ಲಿ ಸೇರಿಕೊಂಡಿರುವ ಕ್ರಿಮಿಕೀಟಗಳು ನಿರ್ಮೂಲನವಾಗಬೇಕು ಮತ್ತು ಹೊರಗಿನ ಕೀಟಗಳು ಒಳಗೆ ಪ್ರವೇಶಿಸದಂತೆ ತಡೆಗಟ್ಟಬೇಕು.  ಅಲ್ಲದೆ ಕ್ರಿಮಿಕೀಟಗಳು ನಾಶವಾದ ಮೇಲೆ ರಾಸಾಯನಿಕ ಧಾನ್ಯಗಳಲ್ಲಿ ನಂಜನ್ನುಂಟುಮಾಡಬಾರದು.  ಈ ಎಲ್ಲ ಗುಣಗಳೂ ಒಂದೇ ಕೀಟನಾಶಕ ವಸ್ತುವಿಗೆ ಇರುವುದು ಸಾಧ್ಯವಿಲ್ಲದಿರುವುದರಿಂದ ಕೆಲವು ವಿಶಿಷ್ಟ ರೀತಿಯ ಕೀಟನಾಶಕಗಳನ್ನು ತಯಾರಿಸುವ ಪ್ರಯತ್ನಗಳು ನಡೆದಿವೆ.  ಮುಖ್ಯ ಕೀಟನಾಶಕಗಳು ಯಾವುದೆಂದರೆ ಪೈರೆತ್ರಮ್ ಎಂಬ ಸಸ್ಯಮೂಲ ದ್ರವ್ಯ, ಆಆಖಿ, ಗೆಮಾಕ್ಸಿನ್ ಮುಂತಾದುವು.  ಇವು ಸಿಂಪಡಿಸಲು ಯೋಗ್ಯವಾಗಿವೆ.  ಕಾರ್ಬನ್ ಡೈ ಸಲ್ಫೈಡ್, ಮೀಥೈಲ್ ಕ್ಲೋರೈಡ್ ಮತ್ತು ಕಾರ್ಬನ್, ಟೆಟ್ರಕ್ಲೋರೈಡ್ ಮಿಶ್ರಣ (3 : 1), ಸೈನೋಗ್ಯಾಸ್, ಮೀಥೈಲ್ ಬ್ರೊಮೈಡ್ ಎಥಿಲೀನ್ ಡೈಬ್ರೋಮೈಡ್ ಮತ್ತು ಮೀಥೈಲ್ ಬ್ರೋಮೈಡ್‍ಗಳ ಮಿಶ್ರಣ ಮುಂತಾದುವು ಧೂಪನಮಾಡಲು ಯೋಗ್ಯವಾಗಿವೆ.  ಈ ಧೂಪನ ಮಿಶ್ರಣಗಳಿಂದ ಹೆಚ್ಚು ಧಾನ್ಯಗಳನ್ನು ಬಹುಬೇಗನೇ ಕ್ರಿಮಿಕೀಟಗಳಿಂದ ಪಾರುಮಾಡಲು ಸಾಧ್ಯ.

ಸಾಧಾರಣವಾಗಿ ಚೀಲಗಳಲ್ಲಿ ಆಹಾರ ಧಾನ್ಯಗಳನ್ನು ಮಾಳಿಗೆಗಳಲ್ಲಿ ದಾಸ್ತಾನುಮಾಡುವರು.  ಗೋಣೀಚೀಲಗಳನ್ನು ಕೆಲವು ಕ್ರಿಮಿನಾಶಕ ವಸ್ತುಗಳಿಂದ ಉಪಚರಿಸಿದರೆ 5, 6 ತಿಂಗಳಗಳ ಕಾಲ ಕೀಟಗಳು ಒಳಗೆ ನುಗ್ಗದಂತೆ ಮಾಡಲು ಸಾಧ್ಯವಿದೆ.
(ಬಿ.ಪಿ.ಎಸ್.; ಕೆ.ಆರ್.ಎಸ್.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ